ನಕ್ಷತ್ರ ವೀಕ್ಷಣೆ -
ನಕ್ಷತ್ರಗಳನ್ನೂ ನಕ್ಷತ್ರಪುಂಜಗಳನ್ನೂ ನೋಡಿ ಗುರುತಿಸುವುದು. ವೀಕ್ಷಕನ ನೆಲೆ ಎತ್ತರವಾದ ಸ್ಥಳವಾಗಿದ್ದು ಪಟ್ಟಣದ ಬೆಳಕಿನಿಂದ ದೂರವಾಗಿರುವುದು ಅಪೇಕ್ಷಣೀಯ. ಚಂದ್ರರಹಿತ ರಾತ್ರಿಯಾದರೆ ಉತ್ತಮ. ಆಕಾಶ ಸ್ವಚ್ಛವಾಗಿರಬೇಕಾದದ್ದು ಅಗತ್ಯ.

ಖಗೋಳ: ವೀಕ್ಷಕನಿಗೆ ಬಲು ದೊಡ್ಡ ಅರ್ಧಗೋಳವೊಂದು ತನ್ನ ಮೇಲೆ ಕವಿಚಿರುವಂತೆಯೂ ಅದರ ಕೇಂದ್ರದಲ್ಲಿ ತಾನಿರುವಂತೆಯೂ ಭಾಸವಾಗುತ್ತದೆ. ಆಕಾಶಕಾಯಗಳೆಲ್ಲವೂ ಈ ಗೋಳದ ಒಳಮೈಗೆ (ಚತ್ತು) ಲಗತ್ತಾಗಿರುವಂತೆ ತೋರುತ್ತವೆ. ವೀಕ್ಷಕನ ನೆತ್ತಿ ಮೇಲಿನ ಆಕಾಶಬಿಂದು ಈ ಅರ್ಧಗೋಳದ ಅತ್ಯುನ್ನತ ಬಿಂದು. ಇದಕ್ಕೆ ವೀಕ್ಷಕನ ಖಮಧ್ಯ ಎಂದು ಹೆಸರು. ಅಲ್ಲಿಂದ ತೊಡಗುವ ಆಕಾಶ(ಖಗೋಳ) ಸುತ್ತಲೂ ಇಳಿದಿಳಿದು ಸಾಗಿ ದೂರದ ಒಂದು ವೃತ್ತದಲ್ಲಿ ಪರ್ಯವಸಾನಗೊಳ್ಳುವುದು. ಅಲ್ಲಿ ಬಾನೂ ಬುವಿಯೂ (ಕಡಲ ಕಿನಾರೆಯಲ್ಲಿ ನಿಂತವರಿಗೆ ಆಕಾಶವೂ ಜಲವೂ) ಸಂಧಿಸಿದಂತೆ ತೋರುತ್ತದೆ. ಆ ಮಹಾವೃತ್ತಕ್ಕೆ ವೀಕ್ಷಕನ ಕ್ಷಿತಿಜವೆಂದು ಹೆಸರು. ಅದರ ಕೇಂದ್ರಬಿಂದುವಿನಲ್ಲಿ ವೀಕ್ಷಕನಿದ್ದಾನೆ. ಕ್ಷಿತಿಜದಿಂದ ಕೆಳಗೆ ಅವನಿಗೆ ಏನೂ ಕಾಣಿಸದು. ಅದರಿಂದ ಮೇಲಿನ ಖಗೋಳಾರ್ಧ ಭಾಗ ಮಾತ್ರ ಅವನ ದೃಷ್ಟಿವಲಯದೊಳಗಿರುವುದು.
ಪ್ರತಿಯೊಂದು ಆಕಾಶಕಾಯವೂ ಕ್ಷಿತಿಜದ ಕೆಳಗಿನಿಂದ ಮೂಡಿ ಆಗಸದಲ್ಲಿ ಮೇಲೇರಿ ಎದುರು ಪಾಶ್ರ್ವಕ್ಕೆ ಸರಿದು ಅಲ್ಲಿ ಇಳಿದಿಳಿದು ಕ್ಷಿತಿಜವನ್ನು ದಾಟಿ ಮಾಯವಾಗುವುದು. ಅದರ ಪಥವನ್ನು ಎಚ್ಚರಿಕೆಯಿಂದ ಗಮನಿಸಿದರೆ ಅದೊಂದು ವೃತ್ತಕಂಸವೆಂದು ತಿಳಿಯುತ್ತದೆ. ಈ ವೃತ್ತದ ಕೇಂದ್ರವನ್ನು ವೀಕ್ಷಕನಿಗೆ ಜೋಡಿಸುವ ರೇಖೆಯ ಸುತ್ತ ಖಗೋಳ ಪೂರ್ವದಿಂದ ಪಶ್ಚಿಮಕ್ಕೆ ಆವರ್ತಿಸುತ್ತದೆ ಎಂದು ಕ್ರಮೇಣ ಗೊತ್ತಾಗುವುದು. ಎಲ್ಲ ಆಕಾಶಕಾಯಗಳನ್ನೂ ಕುರಿತಂತೆ ಈ ರೇಖೆ ಒಂದೇ. ಇದಕ್ಕೆ ಖಗೋಳದ ಅಕ್ಷವೆಂದು ಹೆಸರು.

ಧ್ರುವಬಿಂದುಗಳು: ಖಗೋಳದ ಅಕ್ಷ ಖಗೋಳವನ್ನು ಎರಡು ಬಿಂದುಗಳಲ್ಲಿ ಸಂಧಿಸುವುದು. ಇವುಗಳ ಪೈಕಿ ಒಂದು ವೀಕ್ಷಕನ ದೃಗ್ಗೋಚರ ಖಗೋಳಾರ್ಧದಲ್ಲಿದೆ. ಇನ್ನೊಂದು ದೃಗಗೋಚರ ಖಗೋಳಾರ್ಧದಲ್ಲಿದೆ. ಈ ಬಿಂದುಗಳ ಸನಿಹದಲ್ಲಿರುವ ಆಕಾಶಕಾಯಗಳು ನಿಶ್ಚಲವಾಗಿರುವಂತೆ ತೋರುವುವು. ಭೂಮಿಯ ಉತ್ತರಾರ್ಧದಲ್ಲಿ ಇರುವವರಿಗೆ ಇಂಥ ಒಂದು ನಕ್ಷತ್ರ ಕಾಣಿಸುತ್ತದೆ-ಅದೇ ಧ್ರುವ (ಶಾಶ್ವತ) ನಕ್ಷತ್ರ. ಆದ್ದರಿಂದ ಧ್ರುವನಕ್ಷತ್ರವನ್ನು ಗುರುತಿಸಿದ್ದಾದರೆ ಉಳಿದ ನಕ್ಷತ್ರಗಳನ್ನೂ ನಕ್ಷತ್ರಪುಂಜಗಳನ್ನೂ ಪತ್ತೆಹಚ್ಚುವುದು ಸುಲಭ.

ಧ್ರುವನಕ್ಷತ್ರ: ಆಕಾಶದ ಉತ್ತರ ವಲಯದಲ್ಲಿ ಎರಡು ಪ್ರಸಿದ್ಧ ನಕ್ಷತ್ರ ಪುಂಜಗಳಿವೆ-ಸಪ್ತರ್ಷಿಮಂಡಲ, ಕೆಸೀಯೊಪೀಯ. (ಕುಂತಿ) ಇವುಗಳ ಸಾಪೇಕ್ಷ ವಿನ್ಯಾಸಗಳನ್ನು ಚಿತ್ರದಲ್ಲಿ ಕಾಣಿಸಿದೆ. ವರ್ಷದ ಯಾವುದೇ ಭಾಗದಲ್ಲಿ ರಾತ್ರಿಯ ಯಾವುದೇ ಜಾವದಲ್ಲಿ, ಸಾಧಾರಣವಾಗಿ, ಈ ಪುಂಜಗಳ ನೆರವಿನಿಂದ ಧ್ರುವನಕ್ಷತ್ರವನ್ನು ಗುರುತಿಸುವುದು ಸುಲಭ. ಧ್ರುವನಕ್ಷತ್ರದ ಕೋನೋನ್ನತಿ ವೀಕ್ಷಕನ ಅಕ್ಷಾಂಶಕ್ಕೆ ಸಮವಾಗಿದೆ. ಕರ್ನಾಟಕ ರಾಜ್ಯ 11( 30` ಉ.ಅಕ್ಷಾಂಶದಿಂದ 18( 45` ಉ.ಅಕ್ಷಾಂಶದವರೆಗೆ ವ್ಯಾಪಿಸಿರುವುದರಿಂದ ಈ ಪ್ರದೇಶದ ವೀಕ್ಷಕರಿಗೆ ಧ್ರುವ ನಕ್ಷತ್ರದ ಕೋನೋನ್ನತಿ 11( 30`-18( 45` ನಡುವೆ ಇರುವುದು. ಉತ್ತರ ಮೇರುವಿಗೆ ಹೋದವನಿಗೆ (ಅಕ್ಷಾಂಶ 90() ಧ್ರುವನಕ್ಷತ್ರ ನೆತ್ತಿ ಮೇಲೆ ಕಾಣಿಸುವುದು. 

ಖಗೋಳ ವಿಭಾಗಗಳು: ಧ್ರುವನಕ್ಷತ್ರವನ್ನು ವೀಕ್ಷಕನ ಖಮಧ್ಯಕ್ಕೆ ಸೇರಿಸುವ ಮಹಾವೃತ್ತಕ್ಕೆ ಯಾಮ್ಯೋತ್ತರವೆಂದು ಹೆಸರು. ವೀಕ್ಷಕನೇ ಇದರ ಕೇಂದ್ರ ಕೂಡ. ಈ ವೃತ್ತ ಖಗೋಳವನ್ನು ಪೂರ್ವಾರ್ಧ ಮತ್ತು ಪಶ್ಚಿಮಾರ್ಧ ಗೋಳಗಳಾಗಿ ವಿಭಾಗಿಸುವುದು. ಕ್ಷಿತಿಜವನ್ನು ಯಾಮ್ಯೋತ್ತರ ಸಂಧಿಸುವ ಎರಡು ಬಿಂದುಗಳ ಪೈಕಿ ಧ್ರುವನಕ್ಷತ್ರದ ಸಮೀಪದ್ದು ಉತ್ತರ ಬಿಂದು, ಅದರ ಎದುರಿನದು ದಕ್ಷಿಣಬಿಂದು. ಯಾಮ್ಯೋತ್ತರಕ್ಕೆ ಲಂಬವಾಗಿ ಎಳೆದ ಮಹಾವೃತ್ತ (ಇದರ ಕೇಂದ್ರ ಕೂಡ ವೀಕ್ಷಕನೇ. ಇದು ಸಹ ಆತನ ಖಮಧ್ಯದ ಮೂಲಕ ಹಾಯುತ್ತದೆ) ಕ್ಷಿತಿಜವನ್ನು ಸಂಧಿಸುವ ಎರಡು ಬಿಂದುಗಳ ಪೈಕಿ ಪೂರ್ವಾರ್ಧಗೋಳದಲ್ಲಿರುವುದು ಪೂರ್ವ ಬಿಂದು, ಪಶ್ಚಿಮಾರ್ಧಗೋಳದಲ್ಲಿರುವುದು ಪಶ್ಚಿಮ ಬಿಂದು. 
ನಕ್ಷತ್ರವೀಕ್ಷಕ ಖಗೋಳದ ಈ ನಾಲ್ಕು ಖಂಡಗಳನ್ನು ಅರಿತಿರುವುದು ಅವಶ್ಯ: ಪೂರ್ವಾರ್ಧಗೋಳದಲ್ಲಿ ಉತ್ತರ, ದಕ್ಷಿಣ ಖಂಡಗಳು; ಅದೇ ರೀತಿ ಪಶ್ಚಿಮಾರ್ಧ ಗೋಳದಲ್ಲಿ ಉತ್ತರ ದಕ್ಷಿಣ ಖಂಡಗಳು. ಇವುಗಳಿಗೆ ಅನುಕ್ರಮವಾಗಿ ಪೂರ್ವ-ಉತ್ತರ, ಪೂರ್ವ-ದಕ್ಷಿಣ ಪಶ್ಚಿಮ-ಉತ್ತರ, ಪಶ್ಚಿಮ-ದಕ್ಷಿಣ ಖಂಡಗಳೆಂಬ ಹೆಸರುಂಟು.

ವಿಷುವದ್ ಮತ್ತು ಕ್ರಾಂತಿವೃತ್ತಗಳು: ಖಗೋಳದ ಅಕ್ಷಕ್ಕೆ, ಅಂದರೆ ವೀಕ್ಷಕನನ್ನು ಧ್ರುವನಕ್ಷತ್ರಕ್ಕೆ ಜೋಡಿಸುವ ರೇಖೆಗೆ, ಲಂಬವಾಗಿ ಎಳೆದ ಮಹಾ ವೃತ್ತಕ್ಕೆ (ಇದರ ಕೇಂದ್ರವೂ ವೀಕ್ಷಕನೇ) ವಿಷುವದ್ವøತ್ತ ಎಂದು ಹೆಸರು. ಇದು ಕ್ಷಿತಿಜವನ್ನು ಪೂರ್ವ ಮತ್ತು ಪಶ್ಚಿಮ ಬಿಂದುಗಳಲ್ಲಿ ಸಂಧಿಸುವುದು. ವಿಷುವದ್ವøತ್ತ ಖಗೋಳವನ್ನು ಉತ್ತರಾರ್ಧ ಮತ್ತು ದಕ್ಷಿಣಾರ್ಧಗೋಳಗಳಾಗಿ ವಿಭಾಗಿಸುತ್ತದೆ. ಎಲ್ಲ ಆಕಾಶಕಾಯಗಳ ದೈನಂದಿನ ಪಥಗಳೂ (ಅಂದರೆ ಮೂಡಿ ಮುಳುಗುವತನಕದ ಹಾದಿಗಳೂ) ವಿಷುವದ್ವøತ್ತಕ್ಕೆ ಸಮಾಂತರವಾಗಿರುವ ಅಲ್ಪವೃತ್ತಗಳು. ಧ್ರುವ ಬಿಂದುಗಳಲ್ಲಿರುವ ನಕ್ಷತ್ರಗಳ ಪಥಗಳು ಬಿಂದುವೃತ್ತಗಳಾಗುತ್ತವೆ. ಸೂರ್ಯ ವಿಷುವದ್ವøತ್ತದ ಮೇಲೆ ಮಾರ್ಚ್ 21ರಂದು ಮೇಷಬಿಂದುವಿನಲ್ಲೂ, γ, ಸೆಪ್ಟೆಂಬರ್ 21ರಂದು ತುಲಾ ಬಿಂದುವಿನಲ್ಲೂ, Ω, ಇರುವುದರಿಂದ ಸೂರ್ಯನ ದೈನಂದಿನ ಪಥ ವಿಷುವದ್ವøತ್ತವೇ ಆಗುವುದು.

ಒಂದು ವರ್ಷಕಾಲ ಸೂರ್ಯಚಂದ್ರ ಮತ್ತು ಗ್ರಹಸ್ಥಾನಗಳನ್ನು, ಪ್ರತಿರಾತ್ರಿಯೂ ಅದೇ ಹೊತ್ತಿನಲ್ಲಿ, ಸ್ಥಿರನಕ್ಷತ್ರಪುಂಜಗಳ ಹಿನ್ನೆಲೆಯಲ್ಲಿ ಗುರುತಿಸಿದರೆ ಅವು ವಿಷುವದ್ವøತ್ತಕ್ಕೆ ಸುಮಾರು 23( 27` ಗಳಷ್ಟು ಮಾಲಿಕೊಂಡಿರುವ ಬೇರೆ ಒಂದು ಮಹಾವೃತ್ತದ ಆಸುಪಾಸಿನಲ್ಲಿ ಇರುವುದು ತಿಳಿಯುತ್ತದೆ. ಈ ವೃತ್ತಕ್ಕೆ ಕ್ರಾಂತಿವೃತ್ತ ಎಂದೂ 23( 27` ಕೋನಕ್ಕೆ ಕ್ರಾಂತಿವೃತ್ತದ ಬಾಗು ಎಂದೂ ಹೆಸರು. ಕ್ರಾಂತಿ ವೃತ್ತ ವಿಷುವದ್ವøತ್ತವನ್ನು ಸಂಧಿಸುವ ಎರಡು ಬಿಂದುಗಳೇ ಮೇಷ(γ) ಮತ್ತು ತುಲಾ (Ω). ಚಂದ್ರ ಹಾಗೂ ಇತರ ಒಂದೆರಡು ಗ್ರಹಗಳೂ ಬಾನಿನಲ್ಲಿ ತೋರುತ್ತಿರುವಾಗ ಸೂರ್ಯ ಮುಳುಗಿದ ಅಥವಾ ಮೂಡಲಿರುವ ಬಿಂದುವನ್ನು ಗಣನೆಗೆ ತಂದುಕೊಂಡು ಇವೆಲ್ಲವನ್ನೂ ಕಾಲ್ಪನಿಕವಾಗಿ ಸೇರಿಸಿದರೆ ಆಗ ಸ್ಥೂಲವಾಗಿ ಕ್ರಾಂತಿವೃತ್ತ ದೊರೆಯುವುದು. ಕ್ರಾಂತಿವೃತ್ತದ ಮೇಲೆ ಪಶ್ಚಿಮದಿಂದ ಪೂರ್ವಕ್ಕೆ ಸಾಗುವಾಗ ಅದು ವಿಷುವದ್ವøತ್ತವನ್ನು ದಕ್ಷಿಣದಿಂದ ಉತ್ತರಕ್ಕೆ ಹಾಯುವ ಬಿಂದು ಮೇಷ ಬಿಂದು (γ) ಉತ್ತರದಿಂದ ದಕ್ಷಿಣಕ್ಕೆ ಹಾಯುವ ಬಿಂದು ತುಲಾಬಿಂದು (Ω). ಇವುಗಳಿಗೆ ಒಟ್ಟಾಗಿ ವಿಷುವದ್ಬಿಂದುಗಳೆಂದು ಹೆಸರು.

ವಿಷುವದ್ಬಿಂದುಗಳು: ಪೆಗಸಸ್ ಪುಂಜವನ್ನು ಚಿತ್ರದಲ್ಲಿ ಕಾಣಿಸಿದೆ. ಇದನ್ನು ಬರಿಗಣ್ಣುಗಳಿಂದ ನೋಡಿ ಗುರುತಿಸಬಹುದು. ಮೀನರಾಶಿ ಪೆಗಸಸ್ ಪುಂಜದ ಬಳಿ ಉಂಟು. ಮೇಷ ಬಿಂದು ಮೀನರಾಶಿಯಲ್ಲಿದೆ. ಸಿಂಹ ಹಾಗೂ ಕನ್ಯಾರಾಶಿಗಳನ್ನು ಚಿತ್ರದಲ್ಲಿ ಕಾಣಿಸಿದೆ. ಇವನ್ನು ಸಹ ಬರಿಗಣ್ಣುಗಳಿಂದ ನೋಡಿ ಗುರುತಿಸಬಹುದು. ತುಲಾಬಿಂದು ಕನ್ಯಾರಾಶಿಯಲ್ಲಿದೆ.

ಮೇಷಬಿಂದು ಮೇಷರಾಶಿಯಲ್ಲಿ ಇರದೆ ಅದರ ಹಿಂದಿನದಾದ ಮೀನರಾಶಿಯಲ್ಲಿ ಇರುವುದೇಕೆ? ಭೂಮಿ-ಚಂದ್ರ-ಸೂರ್ಯರ ಜಟಿಲ ಸಂಬಂಧದ ಪರಿಣಾಮವಾಗಿ ಭೂಮ್ಯಕ್ಷ ಸುಮಾರು 26,000 ವರ್ಷಗಳ ಅವಧಿಯಲ್ಲಿ ಲಂಬ ವೃತ್ತೀಯ ಶಂಕುವೊಂದರ ವಕ್ರಮೈಯನ್ನು ರೇಖಿಸುತ್ತದೆ. ಈ ಶಂಕುವಿನ ಶೃಂಗಾರ್ಧಕೋನ 23( 27` (ಇದು ಕ್ರಾಂತಿವೃತ್ತದ ಬಾಗು ಎಂದು ಹಿಂದೆ ಹೇಳಿದೆ). ಅಕ್ಷದ ಈ ಚಲನೆಗೆ ಅಯನಾಂಶವೆಂದು ಹೆಸರು. ಇದರ ಪರಿಣಾಮವಾಗಿ ವಿಷುವದ್ವøತ್ತ ಕ್ರಾಂತಿವೃತ್ತದ ಮೇಲೆ ಪೂರ್ವ-ಪಶ್ಚಿಮ ದಿಶೆಯಲ್ಲಿ ಅದೇ ಮಂದ ವೇಗದಲ್ಲಿ ಅಂದರೆ ವರ್ಷವೊಂದರ ಸುಮಾರು 50" ನಂತೆ (360º  6000) ಜಾರುವುದು. ಹೀಗಾಗಿ ಈಗ್ಗೆ ಸುಮಾರು 2,000 ವರ್ಷಗಳ ಹಿಂದೆ ಮೇಷ ರಾಶಿಯಲ್ಲೇ ಇದ್ದ ಮೇಷ ಬಿಂದು ಈಗ ಮೀನರಾಶಿಗೂ ಅದೇ ರೀತಿ ತುಲಾರಾಶಿಯಲ್ಲೇ ಇದ್ದ ತುಲಾಬಿಂದು ಕನ್ಯಾರಾಶಿಗೂ ಬಂದಿವೆ.

ಕೆಲವು ಪ್ರಸಿದ್ಧ ನಕ್ಷತ್ರಪುಂಜಗಳು: ಮಹಾವ್ಯಾಧ, ಮಹಾಶ್ವಾನ, ವೃಶ್ಚಿಕ, ಸಪ್ತರ್ಷಿಮಂಡಲ, ಆರೀಗ, ಸಿಂಹ, ಕನ್ಯಾ, ಕೆಸೀಯೋಪಿಯ, ತ್ರಿಶಂಕು, ಧನು, ಪೆಗಸಸ್, ಮಿಥುನ, ವೃಷಭ-ಇವಿಷ್ಟು ನಕ್ಷತ್ರಪುಂಜಗಳನ್ನು ಸುಲಭವಾಗಿ ಗುರುತಿಸಿ ನೆನಪಿನಲ್ಲಿಡಬಹುದು. ಈ ಪುಂಜಗಳಲ್ಲಿರುವ ಪ್ರಸಿದ್ಧ ತಾರೆಗಳಿವು:

ನಕ್ಷತ್ರದ ಹೆಸರು
ಆ ನಕ್ಷತ್ರವಿರುವ ಪುಂಜದ ಹೆಸರು

ಲುಬ್ದಕ 
ಅಗಸ್ತ್ಯ
ಸೆಂಟಾರಸ್
ಅಭಿಜಿತ್ 
ಕಪೆಲ್ಲ 
ಸ್ವಾತಿ 
ರೈಜೆಲ್
ಪ್ರೊಸಿಯಾನ್
ವೈತರಣೀಮುಖ 
ಶ್ರವಣ 
ಆದ್ರ್ರಾ 
ರೋಹಿಣಿ 
ಚಿತ್ತ 
ಪೊಲ್ಲಕ್ಸ್
ಜೇಷ್ಠ 
ಪೋಮಲ್‍ಹಾಟ್
ಡೆನೆಬ್
ಮಖಾ
ಧ್ರುವನಕ್ಷತ್ರ
ಕ್ಯಾನಿಸ್‍ಮೇಜರ್ (ಮಹಾಶ್ವಾನ )
ಕರೀನ (ದೇವನೌಕಾ)
ಸೆಂಟಾರಸ್ (ಕಿನ್ನರ)
ಲೈರ (ವೀಣಾ)
ಆರೀಗ (ವಿಜಯಸಾರಥಿ)
ಬೂಟೀಸ್ (ಸಹದೇವ)
ಒರೈಯನ್ (ಮಹಾವ್ಯಾಧ)
ಕ್ಯಾನಿಸ್ ಮೈನರ್ (ಲಘು ಶ್ವಾನ)
ಇರಿಡನಸ್ (ವೈತರಣೀ)
ಆ್ಯಕ್ವಿಲ (ಗರುಡ)
ಒರೈಯನ್ (ಮಹಾವ್ಯಾಧ)
ಟಾರಸ್ (ವೃಷಭ)
ವರ್ಗೋ (ಕನ್ಯಾ) 
ಜೆಮಿನಿ (ಮಿಥುನ)
ಸ್ಕಾರ್ಪಿಯಸ್ (ವೃಶ್ಚಿಕ)
ಪಿಸೀಸ್ (ಆಸ್ಟ್ರಲಿಸ್) (ದಕ್ಷಿಣಮೀನ)
ಸಿಗ್ನಸ್ (ರಾಜಹಂಸ)
ಲಿಯೋ (ಸಿಂಹ)
ಅರ್ಸ ಮೈನರ್ (ಲಘು ಸಪ್ತರ್ಷಿ)

	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ